Ellaru Maduvudu Hottegagi Kannada Song Lyrics
Song: Ellaru Maduvudu Hottegagi
Singer: Rajkumar
Movie: Shiva Mecchida Kannappa
Music: T. G. Lingappa
Lyrics: Kanaka Dasa
Label: Lahari Music
Ellaru Maduvudu Hottegagi Kannada Song Lyrics
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ।।ಪ ।।
ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||1||
ಚಂಡಭಟರಾಗಿ ನಡೆದು ಕತ್ತಿ ಡಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||2||
ಅಂಗಡಿ ಮುಂಗಟ್ಟನ್ನ ಹೂಡಿ ವ್ಯಂಗ ಮಾತುಗಳನ್ನ ಅಡಿ
ಭಂಗಬಿದ್ದು ಗಳಿಸಿವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||3||
ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿ
ರಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||4||
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ
ಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||5||
ಕೊಟ್ಟ ಹಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡು
ಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||6||
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನ ವೇಷಗಳೆಲ್ಲ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||7||
ಹಳ್ಳದಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು
ಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||8||
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ||9||
ಉನ್ನತ ಕಾಗಿನೆಲೆಯಾದಿಕೇಶವನಾ ದ್ಯಾನವನ್ನು
ಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ ||10||